ಬಡತನ ಮತ್ತು ಹಸಿವು ಬಗ್ಗೆ ಮಾಹಿತಿ Information About Poverty and Hunger badatana mattu hasivu bagge mahiti in kannada
ಬಡತನ ಮತ್ತು ಹಸಿವು ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಬಡತನ ಮತ್ತು ಹಸಿವುನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಬಡತನದ ಅರ್ಥ :
ನೀವು ನಿಮ್ಮ ಸುತ್ತಮುತ್ತಲಿನ ಜೀವನವನ್ನು ಗಮನಿಸಿರಬಹುದು. ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಬಡತನ ಕಂಡುಬರುತ್ತದೆ. ನಗರಗಳಲ್ಲಿ ಬೀದಿಬದಿಯ ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರು, ಭಿಕ್ಷುಕರು, ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು, ಅಲೆಮಾರಿಗಳು ಮುಂತಾದವರು ಬಡವರೆನಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸ್ವಂತ ಜಮೀನು ಇಲ್ಲದೆ ಇತರರ ಹೊಲಗದ್ದೆಗಳಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರು, ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರು, ಕೃಷಿಯೇತರ ಕಸಬುಗಳಲ್ಲಿ ತೊಡಗಿರುವ ಬುಟ್ಟಿ ಹೆಣೆಯುವವರು, ಮಡಿಕೆ ಮಾಡುವವರು, ಕಮ್ಮಾರರು, ಮುಂತಾದವರು ಬಡತನದಲ್ಲಿ ವಾಸಿಸುತ್ತಿದ್ದಾರೆ.
ಬಡವರು ಎರಡು ಹೊತ್ತಿನ ಊಟಕ್ಕೆ ಸಾಕಾಗುವಷ್ಟು ಆದಾಯ ಗಳಿಸಲು ವಿಫಲರಾಗುತ್ತಾರೆ. ಇದರಿಂದಾಗಿ ಇವರಲ್ಲಿ ಅಪೌಷ್ಠಿಕತೆ ಮತ್ತು ಅನಾರೋಗ್ಯ ಅಧಿಕವಾಗಿರುತ್ತದೆ. ಶಿಕ್ಷಣ ಮತ್ತು ತರಬೇತಿಯಲ್ಲದೆ ಕೌಶಲ್ಯರಹಿತರಾಗಿರುತ್ತಾರೆ. ಇವರಿಗೆ ಉದ್ಯೋಗಾವಕಾಶಗಳು ಕಡಿಮೆ ಮತ್ತು ಇರುವ ಕೆಲಸವೂ ಸ್ಥಿರವಾಗಿರುವುದಿಲ್ಲ. ಸಾಮಾನ್ಯವಾಗಿ ಬಡವರು ಕಚ್ಚಾ ಮನೆಗಳಲ್ಲಿ ವಾಸಿಸುತ್ತಾರೆ ಅಥವಾ ಮನೆಯೇ ಇರುವುದಿಲ್ಲ. ಹೀಗೆ ಮಾನವನ ಬದುಕಿಗೆ ಅಗತ್ಯವಾದ ಊಟ, ಬಟ್ಟೆ, ವಸತಿ, ಶಿಕ್ಷಣ, ಆರೋಗ್ಯ ಮುಂತಾದ ಕನಿಷ್ಠ ಮೂಲಭೂತ ಅವಶ್ಯಕತೆಗಳಿಂದ ಬಹುಪಾಲು ಜನರು ವಂಚಿತರಾಗಿರುವ ಸ್ಥಿತಿಯನ್ನು ಬಡತನ ಎನ್ನಬಹುದು.
ಆದರೆ ಬಡತನವನ್ನು ಗುರುತಿಸಿ ಅದರ ಪ್ರಮಾಣವನ್ನು ಅಳೆಯುವುದಕ್ಕಾಗಿ ನಿಖರವಾದ ಮಾನದಂಡದ ಅವಶ್ಯತೆಯಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ದಾದಾಭಾಯಿ ನವರೋಜಿಯವರು ಬಡವರನ್ನು ಗುರುತಿಸಲು ಮೊಟ್ಟಮೊದಲ ಬಾರಿಗೆ ಬಡತನ ರೇಖೆಯನ್ನು ಬಳಕೆಗೆ ತಂದರು. ಸ್ವಾತಂತ್ರ್ಯಾ ನಂತರವೂ ಬಡತನ ರೇಖೆಯನ್ನು ಬಡತನ ಅಳೆಯುವ ಪ್ರಮುಖ ಸೂಚಿಯಾಗಿ ಬಳಕೆಯಾಗುತ್ತಿದೆ. ಹಾಗಾದರೆ ಬಡತನ ರೇಖೆ ಎಂದರೇನು? ಮೂಲ ಅವಶ್ಯಕತೆಗಳನ್ನು ಪಡೆದುಕೊಳ್ಳಲು ಅವಶ್ಯವಿರುವ ಕನಿಷ್ಠ ಆದಾಯದ ಪ್ರಮಾಣವೇ ಬಡತನ ರೇಖೆಯಾಗಿದೆ. ಅದು ಒಬ್ಬ ವ್ಯಕ್ತಿಯು ತನ್ನ ಮೂಲ ಅವಶ್ಯಕತೆಗಳನ್ನು ಪೊರೈಸಿಕೊಂಡು, ಆರೋಗ್ಯಯುತವಾಗಿ ಮತ್ತು ಘನತೆಯುತವಾಗಿ ಜೀವನ ನಡೆಸಲು ವೆಚ್ಚ ಮಾಡುವ ಸಾಮರ್ಥ್ಯವನ್ನು ಸೂಚಿಸುತ್ತದೆ.
ಭಾರತದಲ್ಲಿ ಬಡತನಕ್ಕೆ ಕಾರಣಗಳು :
ಭಾರತದಲ್ಲಿನ ಬಡತನಕ್ಕೆ ಹಲವಾರು ಐತಿಹಾಸಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅಂಶಗಳು ಕಾರಣೀಭೂತವಾಗಿವೆ.
೧. ಜನಸಂಖ್ಯೆಯಲ್ಲಿನ ತೀವ್ರ ಹೆಚ್ಚಳ :
ಜನಸಂಖ್ಯೆಯು ತೀವ್ರಗತಿಯಲ್ಲಿ ಏರಿಕೆಯಾಗಿದ್ದುದು ಏನೇ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿದರೂ ಅದು ಹೆಚ್ಚುತ್ತಿರುವ ಜನಸಂಖ್ಯೆಗೆ ಮೂಲ ಅವಶ್ಯಕತೆಗಳನ್ನು ಪೊರೈಸುವಲ್ಲಿ ವಿಫಲವಾಗುತ್ತ ಸಾಗಿರುವುದು ಒಂದು ಪ್ರಮುಖ ಕಾರಣವಾಗಿದೆ.
೨. ಕಡಿಮೆ ಮಟ್ಟದ ರಾಷ್ಟ್ರೀಯ ಆದಾಯ ಹಾಗೂ ಅದರ ವಿಧಾನ ಬೆಳವಣಿಗೆ :
ಒಂದು ಕಡೆ ದೇಶದ ಅನಾಭಿವೃದ್ಧಿ ಹಾಗೂ ಮತ್ತೊಂದೆಡೆ ತೀವ್ರವಾಗಿ ಹೆಚ್ಚಿದ ಜನಸಂಖ್ಯೆ ತಲಾ ಆದಾಯವನ್ನು ಕಡಿಮೆ ಆದಾಯವನ್ನು ಕಡಿಮೆ ಇಡುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಇದು ಒಂದು ವಿಷ ವರ್ತುಲವನ್ನು ಸೃಷ್ಟಿಸಿ, ಕಡಿಮೆ ಆದಾಯ-ಕಡಿಮೆ ಉಳಿತಾಯ-ಕಡಿಮೆ ಬಂಡವಾಳ ಹೊಡಿಕೆ-ಕಡಿಮೆ ಉತ್ಪಾದಕತೆ-ಕಡಿಮೆ ಹಾಗೂ ನಿಧಾನಗತಿಯ ಆದಾಯ ಬೆಳವಣಿಗೆ-ಮತ್ತೆ ಹೆಚ್ಚಿನ ಬಡತನದ ವಿಷವರ್ತುಲವನ್ನು ಸೃಷ್ಟಿಸಿದೆ.
೩. ಬೆಲೆಗಳಲ್ಲಿ ಹೆಚ್ಚಳ :
ನಿರಂತರವಾಗಿ ಏರುತ್ತಿರುವ ಬೆಲೆ ಪ್ರಮಾಣಗಳು ಬಡವರ ಕೊಳ್ಳುವ ಶಕ್ತಿಯನ್ನು ಕುಗ್ಗಿಸಿ, ಅವರು ಮೂಲ ಅವಶ್ಯಕತೆಗಳನ್ನು ಪೊರೈಸಿಕೊಳ್ಳಲು ಅಸಮರ್ಥರನ್ನಾಗಿಸಿ, ಅವರನ್ನು ಇನ್ನಷ್ಟು ಬಡವರನ್ನಾಗಿಸಲು ಕಾರಣವಾಗಿವೆ.
೪. ನಿರುದ್ಯೋಗ :
ಅಭಿವೃದ್ಧಿ ಪ್ರಕ್ರಿಯೆಯು ಉದ್ಯೋಗವನ್ನು ಅರಸುತ್ತಿರುವ ಜನರನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ವಿಫಲವಾಗಿದ್ದರಿಂದ ದಿನೇ ದಿನೇ ನಿರುದ್ಯೋಗ ಹೆಚ್ಚಾಗಿ ಬಡತನವು ಕೂಡ ಹೆಚ್ಚಾಗಿದೆ.
೫. ಬಂಡವಾಳದ ಕೊರತೆ :
ಕಡಿಮೆ ಆದಾಯ ಹಾಗೂ ಉಳಿತಾಯಗಳಿಂದಾಗಿ ಹೊಡಿಕೆಗೆ ಅಗತ್ಯವಾದ ಬಂಡವಾಳವನ್ನು ಸೃಜಿಸಲು ಸಾಧ್ಯವಾಗಿಲ್ಲ. ಹೀಗಾಗಿ ಬಂಡವಾಳ ಸಂಚಯನ ಕುಂಠಿತಗೊಂಡಿದ್ದು, ಉತ್ಪಾದಕತೆ ಮತ್ತ ಆದಾಯ ಸೃಷ್ಟಿಸುವಿಕೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿ ಬಡತನಕ್ಕೆ ಕಾರಣವಾಗಿದೆ.
ಹಸಿವು ಮತ್ತು ಆಹಾರ ಭದ್ರತೆ :
ಬಡತನದ ಬಹುಮುಖ್ಯ ಲಕ್ಷಣವೆಂದರೆ ಹಸಿವು, ಅಂದರೆ ದಿನಂಪ್ರತಿ ಸೂಕ್ತ ಪ್ರಮಾಣದ ಹಾಗೂ ಪೌಷ್ಠಿಕ ಆಹಾರ ದೊರೆಯದೇ ಇರುವುದು. ಆಹಾರ ಪದಾರ್ಥಗಳು ಭೌತಿಕವಾಗಿ ದೊರೆಯದೇ ಇರುವುದು, ಅವು ಲಭ್ಯವಿದ್ದರೂ ಜನರಲ್ಲಿ ಅವುಗಳನ್ನು ಕೊಳ್ಳಲು ಸಮರ್ಪಕ ಆದಾಯ ಇಲ್ಲದಿರುವುದು ಜನರ ಆಹಾರದ ಆಭದ್ರತೆಯನ್ನು ಹೆಚ್ಚಿಸುತ್ತದೆ. ಬಹುತೇಕ ಬಡಜನರು ಅರೆಹೊಟ್ಟೆ ಮತ್ತು ಹಸಿವಿನಿಂದ ಬದುಕಬೇಕಾದ ಸ್ಥಿತಿಯಿದೆ. ಇತ್ತೀಚೆಗೆ ವಿಶ್ವದ ಹಸಿವಿನ ಪ್ರಮಾಣವನ್ನು ಅಳೆಯಲು ಅಂತರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯು ʼವಿಶ್ವ ಹಸಿವಿನ ಸೂಚ್ಯಂಕʼ ಎಂಬ ಮಾನದಂಡವನ್ನು ರೂಪಿಸಿ ಪ್ರತಿವರ್ಷ ವಿವಿಧ ದೇಶಗಳಲ್ಲಿರುವ ಹಸಿವಿನ ಪ್ರಮಾಣದ ಅಂದಾಜನ್ನು ಮಾಡುತ್ತದೆ.
ಇತ್ತೀಚಿನ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ ಪ್ರಕಾರ ಭಾರತದಲ್ಲಿ ಸುಮಾರು ಶೇ. ೭೯ರಷ್ಟು ಮಕ್ಕಳು ಮತ್ತು ಶೇ.೫೮ರಷ್ಟು ಗರ್ಭಿಣಿ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರಲ್ಲದೇ ಪ್ರತಿ ಇಬ್ಬರು ಮಕ್ಕಳಲ್ಲಿ ಒಂದು ಮಗು ಮತ್ತು ಪ್ರತಿ ಇಬ್ಬರು ಮಕ್ಕಳಲ್ಲಿ ಒಂದು ಮಗು ಮತ್ತು ಪ್ರತಿ ಮೂವರು ಮಹಿಳೆಯರಲ್ಲಿ ಒಬ್ಬ ಮಹಿಳೆ ಕಡಿಮೆ ತೂಕ ಹೊಂದಿದ್ದಾರೆ. ವಿಶ್ವದ ಕಡಿಮೆ ತೂಕ ಹೊಂದಿದ ಮಕ್ಕಳಲ್ಲಿ ಶೇ. ೪೩ರಷ್ಟು ಮಕ್ಕಳು ಭಾರತದಲ್ಲಿದ್ದಾರೆ. ರಕ್ತಹೀನತೆ ಮತ್ತು ಕಡಿಮೆ ತೂಕ ಹಸಿವಿನ ಅಥವಾ ಆಹಾರದ ಅಲಭ್ಯತೆಯ ಪರಿಣಾಮಗಳಾಗಿವೆ.
ಆಹಾರ ಭದ್ರತೆ:
ದೇಶದ ಪ್ರತಿಯೊಬ್ಬರಿಗೂ ಕನಿಷ್ಠ ಪ್ರಮಾಣದ ಆಹಾರವನ್ನು ಅವರು ನೀಡಬಹುದಾದ ಬೆಲೆಗೆ ಮತ್ತು ಅವರು ವಾಸಿಸುವ ಸ್ಥಳದ ಸಮೀಪ ಒದಗಿಸುವುದು ಅತ್ಯಾವಶ್ಯಕ. ಇದನ್ನೇ ನಾವು ಆಹಾರ ಭದ್ರತೆ ಎನ್ನುವುದು. ಆಹಾರ ಭದ್ರತೆ ಒದಗಿಸುವುದು ಒಂದು ಬೆಂಬಲಾತ್ಮಕವಾದ ಕ್ರಮವಾಗಿದ್ದು ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ಆಹಾರ ಭದ್ರತೆಯು ಈ ಮೂರು ಖಾತರಿಗಳನ್ನು ಒಳಗೊಂಡಿದೆ.
ಕ್ರಮಗಳು
ಭಾರತದಲ್ಲಿ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಆಹಾರ ಭದ್ರತೆಯನ್ನು ಈ ಎರಡು ಕ್ರಮಗಳ ಮೂಲಕ ಸಾಕಾರಗೊಳಿಸಲು ಪ್ರಯತ್ನಿದೆ.
೧. ಕಾಪು ದಾಸ್ತಾನು :
ಸರ್ಕಾರವು ಪ್ರತಿವರ್ಷ ಮಾರುಕಟ್ಟೆಯಿಂದ ಕನಿಷ್ಠ ಬೆಂಬಲ ಬೆಲೆ ನೀಡಿ ಆಹಾರ ಧಾನ್ಯಗಳನ್ನು ಖರೀದಿಸಿ ದಾಸ್ತಾನು ಮಾಡುತ್ತದೆ. ಇದರ ಸಲುವಾಗಿ ೧೯೬೫ರಲ್ಲಿ ಭಾರತೀಯ ಆಹಾರ ನಿಗಮವನ್ನು ಸ್ಥಾಪಿಸಿ ಅದರ ಮೂಲಕ ಆಹಾರ ಧಾನ್ಯಗಳ ಖರೀದಿ, ಅವುಗಳ ವೈಜ್ಞಾನಿಕ ಸಂಗ್ರಹಣೆಗಾಗಿ ಗೋದಾಮುಗಳ ನಿರ್ಮಾಣ ಕಾರ್ಯ ಕೈಗೊಳ್ಳುತ್ತಿದೆ. ಈ ಪ್ರಕ್ರಿಯೆಯನ್ನು ಕಾಪು ದಾಸ್ತಾನು ಎಂದು ಕರೆಯುತ್ತೇವೆ. ಹೀಗೆ ಸಂಗ್ರಹಿಸಿದ ಧಾನ್ಯಗಳನ್ನು ಜನರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ವಿತರಿಸಲಾಗುತ್ತದೆ.
೨. ಸಾರ್ವಜನಿಕ ವಿತರಣಾ ವ್ಯವಸ್ಥೆ :
ಭಾರತೀಯ ಆಹಾರ ನಿಗಮದ ಮೂಲಕ ಖರೀದಿಸಿದ ಧಾನ್ಯಗಳನ್ನು ಮಾರುಕಟ್ಟೆಯಲ್ಲಿನ ಬೆಲೆಗಳಿಗಿಂತ ಕಡಿಮೆ ಬೆಲೆಗೆ ಸರ್ಕಾರವು ಬಡಜನರಿಗೆ ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸುತ್ತದೆ. ಇದೇ ಸಾರ್ವಜನಿಕ ವಿತರಣಾ ವ್ಯವಸ್ಥೆ. ಆಹಾರ ಧಾನ್ಯಗಳಲ್ಲದೇ, ಖಾದ್ಯ ತೈಲ, ಸಕ್ಕರೆ, ಸೀಮೆ ಎಣ್ಣೆ ಹಾಗೂ ಇತರ ಅವಶ್ಯಕ ವಸ್ತುಗಳನ್ನು ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸುವ ಕಾರ್ಯವನ್ನು ಸರ್ಕಾರ ಕೈಗೊಂಡಿದೆ. ಭಾರತದಾದ್ಯಂತ ೫ ಲಕ್ಷಕ್ಕೂ ಹೆಚ್ಚು ನ್ಯಾಯ ಬೆಲೆ ಅಂಗಡಿಗಳು ೧೬ ಕೋಟಿಗಿಂತಲೂ ಅಧಿಕ ಕುಟುಂಬಗಳಿಗೆ ಸೇವೆ ಸಲ್ಲಿಸುತ್ತಿವೆ.
ಈ ಸೌಲಭ್ಯಗಳನ್ನು ಪಡೆಯಲು ಪ್ರತಿಯೊಂದು ಕುಟುಂಬವು ಪಡಿತರ ಚೀಟಿ ಹೊಂದುವುದು ಅವಶ್ಯವಿದೆ. ಆರ್ಥಿಕ ಸ್ಥಿತಿ ಆಧರಿಸಿ, ವಿವಿಧ ಬಗೆಯ ಪಡಿತರ ಚೀಟಿಗಳಿದ್ದು ಈ ಚೀಟಿಗಳು ಪ್ರತಿ ಕುಟುಂಬಕ್ಕೆ ನಿರ್ದಿಷ್ಟ ಪಡಿಸಿದ ಆಹಾರ ಧಾನ್ಯ ಹಾಗೂ ಇತರ ವಸ್ತುಗಳ ಪ್ರಮಾಣಕ್ಕೆ ಬಾಧ್ಯಸ್ಥರನ್ನಾಗಿಸುತ್ತದೆ. ಹೀಗೆ ಬಡತನದ ರೇಖೆಯ ಕೆಳಗಿರುವ ಜನರ ಪಡಿತರ ಚೀಟಿಗೆ ಅಧಿಕ ಪ್ರಮಾಣದ ವಸ್ತುಗಳು ಕಡಿಮೆ ಬೆಲೆಗೆ ಅಥವಾ ಉಚಿತವಾಗಿ ಮಾಸಿಕವಾಗಿ ಪೊರೈಸಲಾಗುತ್ತದೆ. ಅತ್ಯಂತ ಬಡ ಜನರಿಗಾಗಿ ಅಂತ್ಯೋದಯ ಅನ್ನ ಯೋಜನೆ ಜಾರಿಲ್ಲಿದ್ದು ಅದರಡಿ ಅತ್ಯಂತ ಕಡಿಮೆ ದರಕ್ಕೆ ಆಹಾರ ವಿತರಿಸಲಾಗುತ್ತದೆ. ಇನ್ನುಳಿದ ಕುಟುಂಬಗಳಿಗೂ ನಿಗದಿಪಡಿಸಿದ ಆಹಾರ ಧಾನ್ಯ ಪ್ರಮಾಣವನ್ನು ನೀಡಲಾಗುತ್ತದೆ.
ಬಡತನ ನಿರ್ಮಾಲನಾ ಕಾರ್ಯಕ್ರಮಗಳು:
ಸರ್ಕಾರವು ಬಡತನವನ್ನು ನಿರ್ಮಾಲನೆ ಮಾಡಲು ಹಲವಾರು ಕ್ರಮಗಳನ್ನು ಜಾರಿಗೆಗೊಳಿಸಿದೆ. ಈ ಕಾರ್ಯಕ್ರಮಗಳ ಬಡಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿ, ಅವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿ ತನ್ಮೂಲಕ ಬಡತನದ ತೀವ್ರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಸರ್ಕಾರದ ಈ ಕ್ರಮಗಳನ್ನು ನಾಲ್ಕು ವಿಧಗಳನ್ನಾಗಿ ವರ್ಗೀಕರಿಸಬಹುದಾಗಿದೆ.
೧. ಆರ್ಥಿಕ ಅಭಿವೃದ್ಧಿ ಕ್ರಮಗಳು :
ಆರ್ಥಿಕ ಅಭಿವೃದ್ಧಿ ಮತ್ತು ಬಡತನದ ನಡುವೆ ನಿಕಟವಾದ ಸಂಬಂಧವಿದೆ. ದೇಶವು ಆರ್ಥಿಕವಾಗಿ ಅಭಿವೃದ್ಧಿಯನ್ನು ಸಾಧಿಸಿದಂತೆ ಬಡತನದ ಪ್ರಮಾಣವು ಕಡಿಮೆಯಾಗುತ್ತದೆ. ಸರ್ಕಾರವು ಪಂಚವಾರ್ಷಿಕ ಯೋಜನೆಗಳ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಸುತ್ತಿದೆ. ಜೊತೆಗೆ ಅಭಿವೃದ್ಧಿಯ ಫಲಗಳು ಎಲ್ಲ ವರ್ಗದ ಜನರಿಗೆ ದೊರಕುವಂತೆ ನೋಡಿಕೊಳ್ಳುತ್ತಿದೆ.
೨. ಬಡತನ ನಿರ್ಮೂಲನಾ ಕಾರ್ಯಕ್ರಮಗಳು :
ಸರ್ಕಾರವು ೧೯೬೦ರಿಂದೀಚೆಗೆ ಗ್ರಾಮೀಣ ಭಾಗದಲ್ಲಿನ ಜನಸಮುದಾಯಕ್ಕೆ ಅಗತ್ಯವಾಗಿರುವ ಉದ್ಯೋಗಾವಕಾಶಗಳನ್ನು ಒದಗಿಸಿಕೊಡಲು ಹಲವಾರು ಉದ್ಯೋಗ ನಿರ್ಮಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.
೩. ಕನಿಷ್ಠ ಮೂಲ ಅವಶ್ಯಕತೆಗಳ ಪೊರೈಕೆ :
ಗ್ರಾಮೀಣ ಭಾಗದ ಬಡ ಜನರಿಗೆ ಅಗತ್ಯವಿರುವ ಆಹಾರ, ವಸತಿ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೈರ್ಮಲ್ಯ ಮುಂತಾದ ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸಿ, ಅವರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ನ್ಯಾಯ ಬೆಲೆ ಅಂಗಡಿಗಳ ಮೂಲಕ ಬಡಜನರಿಗೆ ಆರೋಗ್ಯ ವಿಮಾ ಸೌಲಭ್ಯ ಒದಗಿಸಲಾಗುತ್ತಿದೆ.
೪. ಸಾಮಾಜಿಕ ಭದ್ರತಾ ಕ್ರಮಗಳು :
ಸಮಾಜದ ಅತಿ ಬಡಕುಟುಂಬಗಳ ಅಸಹಾಯಕರು, ವಯಸ್ಸಾದವರು, ಅಂಗವಿಕಲರು ಮುಂತಾದವರಿಗೆ ಸರ್ಕಾರ ಒದಗಿಸುವ ರಕ್ಷಣೆಗೆ ಸಮಾಜಿಕ ಭದ್ರತೆ ಎನ್ನುತ್ತೇವೆ. ಅನಾಥರಾದ ಮುದುಕರಿಗೆ ʼಸಂಧ್ಯಾ ಸುರಕ್ಷಾ ಯೋಜನೆʼ ಯ ಮೂಲಕ ಪ್ರತಿ ತಿಂಗಳು ವೃದ್ಧಾಪ್ಯ ವೇತನ ನೀಡಲಾಗುತ್ತಿದೆ. ದುಡಿಯಲು ಅಸಮರ್ಥರಾದ ಅಂಗವಿಕಲರಿಗೆ ಮತ್ತು ಬಡ ವಿಧವೆಯರಿಗೆ ವಿಧವಾ ಮಾಶಾಸನ ನೀಡಲಾಗುತ್ತಿದೆ.
ಹೀಗೆ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಬಡಜನರನ್ನು ಬಡತನ ರೇಖೆಯ ಮೇಲೆತ್ತಲು ಪ್ರಯತ್ನಿಸುತ್ತಿದೆ. ಇದರ ಪರಿಣಾಮವಾಗಿ ಬಡತನದ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ.
FAQ
ಅಡುಗೆ ಉಪ್ಪಿನ ರಾಸಾಯನಿಕ ಹೆಸರೇನು?
ಸೋಡಿಯಂ ಕ್ಲೋರೈಡ್ (NaCl).
ಬಾಕ್ಸೈಟ್ ಯಾವ ಲೋಹದ ಅದಿರಾಗಿದೆ?
ಅಲ್ಯುಮಿನಿಯಂ.
ಇತರೆ ವಿಷಯಗಳು :