ದೇವನೂರು ಮಹಾದೇವ ಜೀವನ ಚರಿತ್ರೆ Biography of Devanur Mahadeva jeevana charithre information in Kannada
ದೇವನೂರು ಮಹಾದೇವ ಜೀವನ ಚರಿತ್ರೆ
ಈ ಲೇಖನಿಯಲ್ಲಿ ದೇವನೂರು ಮಹಾದೇವ ಜೀವನ ಚರಿತ್ರೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ದೇವನೂರು ಮಹಾದೇವ :
ಜನನ ಮತ್ತು ಶಿಕ್ಷಣ :
ದೇವನೂರು ಹುಟ್ಟಿದ್ದು 1948ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ. ತಂದೆ ಸಿ.ನಂಜಯ್ಯ (ಪೋಲಿಸ್ ಕಾನ್ಸ್ ಟೇಬಲ್), ತಾಯಿ ನಂಜಮ್ಮ. ದೇವನೂರು, ನಂಜನಗೂಡು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ. ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿ ಪಡೆದ ಇವರು, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಪಡೆದಿದ್ದಾರೆ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಕೆಲ ವರ್ಷಗಳು ಅಧ್ಯಾಪಕರಾಗಿ ಸೇವೆ ಸಲ್ಲಿಸಿ ರಾಜೀನಾಮೆ ನೀಡಿ, ಮೈಸೂರು ಸಮೀಪ ಹುಯಿಲಾಳು ಗ್ರಾಮದ ಜಮೀನಿನಲ್ಲಿ ವ್ಯವಸಾಯದಲ್ಲಿ ನಿರತರು.
ಸಾಹಿತಿಯಾಗಿ ದೇವನೂರು ಮಹಾದೇವ :
ಕನ್ನಡ ಸಾಹಿತ್ಯದ ಮೇಲೆ ಅಪಾರ ಪ್ರಭಾವ ಬೀರಿ ಚರ್ಚೆಗೆ ಒಳಗಾಗಿ, ದಲಿತರ ನೋವು-ನಲಿವು, ಬದುಕು-ಬವಣೆಗಳ ಬಗ್ಗೆ ಮೇಲ್ವರ್ಗದ ಸಾಹಿತಿಗಳು ಸಾಹಿತ್ಯ ರಚಿಸಿದ್ದರೂ, ದಲಿತ ವರ್ಗದವರಿಂದಲೇ ತಮ್ಮ ದುಃಖ ದುಮ್ಮಾನಗಳಿಗೆ ಸಾಹಿತ್ಯದ ಅಭಿವ್ಯಕ್ತಿ ನೀಡಲಾರಂಭಿಸಿದರು. ಹೈಸ್ಕೂಲು ಓದುತ್ತಿದ್ದಾಲೇ ಇವರ ಮೇಲೆ ಪ್ರಭಾವ ಬೀರಿದ ಕೃತಿ – ‘ನೊಂದ ಜೀವಿ’ (ಲೇ. ಮಿಸರಬಲ್ – ವಿಕ್ಟರ್ ಹ್ಯೂಗೋ) ಇವರನ್ನು ಚಿಂತನೆಗೆ ಹಚ್ಚಿ ಬಹಳಷ್ಟು ದಿವಸ ಕಾಡಿದ ಕೃತಿ. ಇವರ ಮೇಲೆ ಪ್ರಭಾವ ಬೀರಿದ ಸಾಹಿತಿಗಳೆಂದರೆ ಬೇಂದ್ರೆ, ಕುವೆಂಪು, ಯು.ಆರ್. ಅನಂತಮೂರ್ತಿ, ಲಂಕೇಶ್, ಚಂದ್ರಶೇಖರ ಕಂಬಾರ, ಪೂರ್ಣ ಚಂದ್ರ ತೇಜಸ್ವಿ, ಕೃಷ್ಣ ಆಲನಹಳ್ಳಿ ಮುಂತಾದವರುಗಳು. ವಿದ್ಯಾರ್ಥಿಯಾಗಿದ್ದಾಗಲೇ ಸಮಾಜವಾದಿ ಯುವಜನ ಸಭಾದ ಕಾರ್ಯಕರ್ತರಾಗಿದ್ದರು. ಕೆಲವು ಗೆಳೆಯರೊಂದಿಗೆ ಸೇರಿ ವಿದ್ಯಾರ್ಥಿ ಸಮುದಾಯಕ್ಕೆ ‘ನರ’ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ಪ್ರಕಟವಾಗುತ್ತಿದ್ದ ‘ಮಾನವ’ ಪತ್ರಿಕೆಯ ಸಂಪಾದಕ ಮಂಡಲಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರು ಬರೆದ ಕಥೆಗಳು ಆಂದೋಲನ, ಪ್ರಜಾವಾಣಿ, ಉದಯವಾಣಿ, ಸಾಕ್ಷಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ‘ದ್ಯಾವನೂರು’ ಎಂಬ ಕಥಾ ಸಂಕಲನದ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದ ವಿಮರ್ಶಕರ, ಸಾಹಿತ್ಯಭಾಸಿಗಳ, ಸಾಹಿತ್ಯಾಸಕ್ತರ ಗಮನ ಸೆಳೆದರು. ದಲಿತ ಸಮಾಜದ ಒಳ ಜೀವನದ ತುಡಿತ-ಮಿಡಿತಗಳನ್ನು ಸಶಕ್ತವಾಗಿ, ಸಮಾಜದ ಎಲ್ಲ ಸಂಕೀರ್ಣತೆಗಳೊಂದಿಗೆ ಮೊದಲ ಬಾರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಕಲಾತ್ಮಕವಾಗಿ, ಕಥನಗಾರಿಕೆಯನ್ನು ತಮ್ಮ ಕಥೆಗಳಲ್ಲಿ ಪ್ರಕಟಿಸಿದರು. ನಂಜನಗೂಡಿನ ಕಡೆಯ ತಮ್ಮ ಜನರ ಆಡುಮಾತಿನ ಶೈಲಿ ಬಳಸುವ ದೇವನೂರರ ಕಥೆಗಳಲ್ಲಿ ಭಾಷೆ, ನುಡಿಗಟ್ಟುಗಳ ಪಾತ್ರ ಮಹತ್ವಪೂರ್ಣವಾದದ್ದು.
ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಬರವಣಿಗೆ ಆರಂಭಿಸಿದ ಮಹಾದೇವ ಅವರ ಮೊದಲ ಕಥೆ “ಕತ್ತಲ ತಿರುವು” (1967) ಪ್ರಕಟವಾದದ್ದು ಕನ್ನಡಪ್ರಭ ದಿನಪತ್ರಿಕೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ 1973-74) ಪಡೆದ ಮಹಾದೇವ ಅವರು ವಿಶ್ವವಿದ್ಯಾಲಯದಲ್ಲಿ ಇದ್ದ ದಿನಗಳಲ್ಲಿಯೇ ಕಥಾಸಂಕಲನ ’ದ್ಯಾವನೂರು’ (1973) ಪ್ರಕಟಿಸಿದ್ದರು. ಒಡಲಾಳ (1979), ಕುಸುಮಬಾಲೆ (1984), ಸಮಗ್ರ (1992), ಎದೆಗೆ ಬಿದ್ದ ಅಕ್ಷರ (2012) ಕೃತಿಗಳನ್ನು ಪ್ರಕಟಿಸಿದ್ದಾರೆ. ಮಹಾದೇವ ಅವರ ಸಾಹಿತ್ಯ ಸಾಧನೆ ಕುರಿತು ’ಅಭಿನವ’ ನಿಯತಕಾಲಿಕೆಯು ’ಯಾರ ಜಪ್ತಿಗೂ ಸಿಗದ ನವಿಲುಗಳು’ (1999) ಎಂಬ ವಿಶೇಷ ಸಂಚಿಕೆ ಪ್ರಕಟಿಸಿದೆ.
ಕುಸುಮಬಾಲೆ ಕಾದಂಬರಿಗೆ ಸಂದ 1990ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು 2015ರ ನವೆಂಬರ್ 14 ರಂದು ಮರಳಿಸಿದರು. ಅದೇ ಸಂದರ್ಭದಲ್ಲಿ ಭಾರತ ಸರ್ಕಾರ ನೀಡಿದ ಪದ್ಮಶ್ರೀ ಪ್ರಶಸ್ತಿಯನ್ನೂ ಮರಳಿಸಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1984), ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ (2012), ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ (2014)ಗಳನ್ನು ತಾತ್ವಿಕ ಕಾರಣಗಳಿಗಾಗಿ ನಿರಾಕರಿಸಿದ್ದಾರೆ.
ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನ(1984)ದ ಅಧ್ಯಕ್ಷತೆ ವಹಿಸಿದ್ದ ಮಹಾದೇವ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (1995), ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (2013), ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ (2012) ಗೌರವ ಪ್ರಾಪ್ತವಾಗಿವೆ. ಅವರ ಒಡಲಾಳ ಕಾದಂಬರಿಗೆ ಕೊಲ್ಕತ್ತ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ (1984) ಸಂದಿದೆ.
ಕಳೆದ ನಾಲ್ಕು ದಶಕಗಳಿಂದ ಕರ್ನಾಟಕ ಸಮಾಜವಾದಿ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಹಾದೇವ ಅವರು ದಲಿತ ಚಳವಳಿಯ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ರಾಜ್ಯದ ರೈತಸಂಘ ಮತ್ತು ಕೆಲ ದಲಿತ ಸಂಘಟನೆಗಳ ಜೊತೆ ಸೇರಿ ಪರ್ಯಾಯ ರಾಜಕಾರಣದ ಪ್ರಯೋಗವಾಗಿ ಆರಂಭಿಸಿದ (2005) ರಾಜಕೀಯ ಪಕ್ಷ ಸರ್ವೋದಯ ಕರ್ನಾಟಕದ ಅಧ್ಯಕ್ಷರಾಗಿದ್ದಾರೆ. 2017ರಲ್ಲಿ ಸರ್ವೋದಯ ಪಕ್ಷವು ರಾಷ್ಟ್ರೀಯ ಪಕ್ಷವಾದ ಸ್ವರಾಜ್ ಇಂಡಿಯಾ ಜೊತೆಗೆ ವಿಲೀನವಾದ ನಂತರ ಸ್ವರಾಜ್ ಇಂಡಿಯಾ ಪಕ್ಷದ ರಾಷ್ತ್ರೀಯ ಮಂಡಳಿ ಸದಸ್ಯರಾಗಿದ್ದಾರೆ. 2016 ರ ಜುಲೈ ತಿಂಗಳಿನಲ್ಲಿ ಪ್ರಾರಂಭಗೊಂಡ ವಿವಿಧ ಸಂಘಟನೆ ಮತ್ತು ಪ್ರಮುಖ ವ್ಯಕ್ತಿಗಳ ಒಕ್ಕೂಟ ‘ಜನಾಂದೋಲನಗಳ ಮಹಾಮೈತ್ರಿ’ಯ ಪ್ರಮುಖರಲ್ಲಿ ಒಬ್ಬರು.
ನಿರ್ವಹಿಸಿದ ಜವಾಬ್ದಾರಿಗಳು :
- ದೇವನೂರು ಮಹಾದೇವ ಅವರು ಕೆಲಕಾಲ ‘ನರಬಂಡಾಯ’ ಹೆಸರಿನ ಪತ್ರಿಕೆ ನಡೆಸಿದರು. ಬಳಿಕ ಅದಕ್ಕೆ ‘ಪಂಚಮ’ ಎಂದು ಹೆಸರಿಟ್ಟರು.
- ಅಧ್ಯಕ್ಷರು -ಜೆ.ಪಿ.ಸ್ವಾಗತ ಸಮಿತಿ ಮತ್ತು ಸರ್ವೋದಯ ಕರ್ನಾಟಕ ಪಕ್ಷ
- ಸಂಚಾಲಕರು – ದಲಿತ ಸಂಘರ್ಷ ಸಮಿತಿ
- ಸದಸ್ಯರು – ಅಂಬೇಡ್ಕರ್ ಸಾಹಿತ್ಯ ಅನುವಾದ ಮಂಡಲಿ, ಕನ್ನಡ ಕಾವಲು ಸಮಿತಿ
- ಅಧ್ಯಾಪಕರು- ಮೈಸೂರಿನ ಭಾರತೀಯ ಭಾಷಾ ಸಂಸ್ಥೆ
- ಸಂದರ್ಶನ ಪ್ರಾಧ್ಯಪಕರು- ಹಂಪಿ ವಿಶ್ವವಿದ್ಯಾನಿಲಯ]
- ದೇವನೂರು ಮಹಾದೇವ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಒಬ್ಬರು. ಇವರು ಪ್ರಸ್ತುತ ಕರ್ನಾಟಕ ಸರ್ವೋದಯ ಪಕ್ಷದ ಅಧ್ಯಕ್ಷರಾಗಿದ್ದಾರೆ.
FAQ :
ದೇವನೂರು ಮಹಾದೇವ ನವರ ಮೇಲೆ ಪ್ರಭಾವ ಬೀರಿದ ಕೃತಿ ಯಾವುದು?
“ನೊಂದ ಜೀವಿ”
ದೇವನೂರು ಮಹಾದೇವ ನವರ ಮೊದಲ ಕಥೆ ಯಾವುದು?
“ಕತ್ತಲ ತಿರುವು”
ಇತರೆ ವಿಷಯಗಳು :
ಚಂದ್ರಶೇಖರ ಕಂಬಾರ ಅವರ ಜೀವನ ಚರಿತ್ರೆ